ಹೊಸಬರ ಕೆಲ ಸಿನಿಮಾಗಳೇ ಹಾಗೆ. ಆರಂಭದಲ್ಲಿ ಇರದ ಕ್ರೇಜು ಸಿನಿಮಾ ರಿಲೀಸ್ ಬಳಿಕ ಜಾಸ್ತಿಯಾಗಿಬಿಡುತ್ತೆ. ಅದಕ್ಕೊಂದೇ ಕಾರಣ ಅನ್ನುವುದಾದರೆ ಸಿನಿಮಾದ ಹಾಡುಗಳು. 'ಮದರಂಗಿ' ಅನ್ನೋ ಚಿತ್ರ ಕ್ರೇಜ್ ಹುಟ್ಟಿಸಿದ್ದೇ 'ಡಾರ್ಲಿಂಗ್ ಡಾರ್ಲಿಂಗ್' ಎಂಬ ರೆಟ್ರೋ ಸ್ಟೈಲ್ ಹಾಡಿನಿಂದ. ಈ ಹಾಡು ಚಿತ್ರಮಂದಿರದವರೆಗೂ ಜನರನ್ನು ಕರೆದುಕೊಂಡು ಹೋಯ್ತು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಈಗ 'ಮದರಂಗಿ'ಗೆ ಐವತ್ತರ ಸಂಭ್ರಮ.
ಆದರೆ, ಐವತ್ತು ದಿನದವರೆಗೆ ಉಳಿಸಿಕೊಂಡ ಚಿತ್ರಮಂದಿರಗಳ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು . ಆದರೂ ಚಿತ್ರತಂಡಕ್ಕೆ ತಕ್ಕಮಟ್ಟಿಗಿನ ಖುಷಿ ಇದೆ. ಚಿತ್ರ ಯಶಸ್ಸು ಕಂಡಿದೆ ಅನ್ನೋದು ನಿರ್ಮಾಪಕ ನಾಗಪ್ಪ ಅವರ ಮಾತು. ಅದು ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲವಂತೆ. ಮೈಸೂರು, ಮಂಡ್ಯ, ಹಾಸನ ಮತ್ತು ದಾವಣಗೆರೆಯಲ್ಲಿ 'ಮದರಂಗಿ' ಬಗ್ಗೆ ಉತ್ತಮ ಮಾತು ಕೇಳಿ ಬಂದಿದೆಯಂತೆ. ಮೈಸೂರಲ್ಲಿ ಹಂಡ್ರೆಡ್ ಡೇಸ್ ಆಗುವ ಲಕ್ಷಣಗಳು ಹೆಚ್ಚಾಗಿವೆ ಅಂತ ದೊಡ್ಡದೊಂದು ನಗೆ ಬೀರುತ್ತಲೇ ಹೇಳಿಕೊಳ್ಳುತ್ತಾರೆ ನಿರ್ದೇಶಕ ಮಲ್ಲಿಕಾರ್ಜುನ.
ಹೀರೋ ಕೃಷ್ಣನಿಗೆ ಅದೇಕೋ 'ಮದರಂಗಿ' ಐವತ್ತು ದಿನ ಪ್ರದರ್ಶನ ಕಂಡಿದ್ದು ಖುಷಿನೇ ಇಲ್ಲವಂತೆ! ಯಾಕಪ್ಪಾ ಕೃಷ್ಣ ಹೀಗೆ ಹೇಳ್ತಾ ಇದ್ದೀಯಾ ಅಂತ ಪ್ರಶ್ನಿಸಿದರೆ, ಸ್ವಲ್ಪ ತೃಪ್ತಿಯೇನೋ ಇದೆ. ಆದರೆ, ನನ್ನೀ 'ಮದರಂಗಿ' 'ಮುಂಗಾರು ಮಳೆ', 'ದುನಿಯಾ' ಚಿತ್ರಗಳಂತೆ ಟ್ರೆಂಡ್ ಕ್ರಿಯೇಟ್ ಮಾಡುತ್ತೆ ಅಂದುಕೊಂಡಿದ್ದೆ. ಆಗಲಿಲ್ಲ. ಆದರೆ, ಮುಂದಿನ ದಿನದಲ್ಲಿ ಖಂಡಿತ ಅಂಥದ್ದೊಂದು ಟ್ರೆಂಡ್ ಸಿನಿಮಾ ಕೊಡ್ತೀನಿ ಅಂತ ಎದೆ ತಟ್ಟಿಕೊಳ್ಳುತ್ತಾರೆ. ಅಂದಹಾಗೆ, ಕೃಷ್ಣ, ಈವರೆಗೆ ಸುಮಾರು 40 ಕ್ಕೂ ಹೆಚ್ಚು ಸ್ಟೋರಿ ಕೇಳಿದ್ದಾರಂತೆ. ಒಂದು ಕಥೆಯೂ ಓಕೆ ಆಗಿಲ್ಲವಂತೆ. ಕಾರಣ, ಮಾಡುವ ಸಿನಿಮಾ ಜನರಿಗೆ ಮೋಸ ಆಗಬಾರದು. ಅಂತಹ ಕಥೆ ಇರುವ ಚಿತ್ರದ ಆಯ್ಕೆಗಾಗಿ ಕಾಯುತ್ತಿದ್ದಾರಂತೆ. ಇನ್ಮುಂದೆ ಕೂಡ ಚೆನ್ನಾಗಿಲ್ಲ ಅನ್ನೋ ಸಿನಿಮಾದಲ್ಲಿ ನಾನು ಇರೋದೇ ಇಲ್ಲ' ಅಂತ ಶಪಥ ಮಾಡುತ್ತಾರೆ ಕೃಷ್ಣ!
No comments:
Post a Comment