Monday, 24 June 2013

ಸ್ಟಾರ್ ಸಿನ್ಮಾ ರಿಲೀಸ್‌


ದರ್ಶನ್‌ ಸಿನಿಮಾ ಸದ್ಯಕ್ಕಿಲ್ಲ, ಸುದೀಪ್‌ ಸಿನಿಮಾ ಇನ್ನೂ ಸೆಟ್ಟೇರಿಲ್ಲ, ಪುನೀತ್‌ ಹೊಸ ಸಿನಿಮಾಕ್ಕೆ ಇನ್ನಷ್ಟೇ ಬಣ್ಣ ಹಚ್ಚಬೇಕು, ಶಿವಣ್ಣ ಸಿನಿಮಾ ಮೊನ್ನೆಯಷ್ಟೇ ತೆರೆಕಂಡಿದೆ. ಹೇಗೆ ಲೆಕ್ಕ ಹಾಕಿ ನೋಡಿದರೂ ಯಾವ ಸ್ಟಾರ್‌ ಸಿನಿಮಾಗಳು ಸದ್ಯಕ್ಕೆ ಬಿಡುಗಡೆಯ ಹಾದಿಯಲ್ಲಿ ಇಲ್ಲ. ಹೊಸಬರ ಹಾಗೂ ಅಪ್‌ಕಮಿಂಗ್‌ ಸ್ಟಾರ್‌ಗಳ ಸಿನಿಮಾ ರಿಲೀಸ್‌ ಮಾಡಲು ಈಗ ಹಾದಿ ಸುಗಮವಾಗಿದೆ. ಅದೇ ಕಾರಣದಿಂದ ಆ ಸಿನಿಮಾ ಬಂದು ಹೋಗಲಿ, ಈ ಸಿನಿಮಾ ಬಂದು ಹೋಗಲಿ ಎಂದು ಕಾದು ಕುಳಿತಿದ್ದ ಒಂದಷ್ಟು ನಿರ್ಮಾಪಕರು ಈಗ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಈ ವಾರದಿಂದಲೇ ಸಿನಿಮಾ ಮೇಲೆ ಸಿನಿಮಾಗಳು ತೆರೆಕಾಣಲಿವೆ. ಅದಕ್ಕೆ ಸಾಕ್ಷಿ ಈ ವಾರ ಬರೋಬ್ಬರಿ ನಾಲ್ಕು ಸಿನಿಮಾಗಳು ತೆರೆಕಾಣುತ್ತಿರುವುದು.
'ಚಂದ್ರ', 'ನಮ್‌ ದುನಿಯಾ ನಮ್‌ ಸ್ಟೈಲ್‌', 'ಸೈಕಲ್‌', 'ಬಿಡಲಾರೆ ಎಂದೂ ನಿನ್ನ' ಈ ವಾರ ತೆರೆಕಾಣುತ್ತಿರುವ ಚಿತ್ರಗಳು. ರೂಪಾ ಅಯ್ಯರ್‌ ನಿರ್ದೇಶನದ 'ಚಂದ್ರ'ದಲ್ಲಿ ಪ್ರೇಮ್‌ ಹಾಗೂ ಶ್ರೀಯಾ ಶರಣ್‌ ನಟಿಸಿದ್ದಾರೆ. ತಮಿಳು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಈ ಚಿತ್ರ ತಯಾರಾಗಿದೆ. ಈ ಚಿತ್ರದ ಮೂಲಕ ಶ್ರೀಯಾ ಶರಣ್‌ ಕನ್ನಡದಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿ ನಟಿಸಿದ್ದಾರೆ. ತುಂಬಾ ಗ್ಯಾಪ್‌ನ ನಂತರ ನಿರ್ದೇಶಕ ಪ್ರೀತಂ ಗುಬ್ಬಿ ಒಂದಷ್ಟು ಹೊಸಬರನ್ನಿಟ್ಟುಕೊಂಡು 'ನಮ್‌ ದುನಿಯಾ ನಮ್‌ ಸ್ಟೈಲ್‌' ಮಾಡಿದರೆ, ನವೀನ್‌ ಕೃಷ್ಣ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿರುವ 'ಬಿಡಲಾರೆ ಎಂದೂ ನಿನ್ನ' ತೆರೆಕಾಣುತ್ತಿದೆ. ಎಲ್ಲವೂ ಸರಿ ಹೋಗುತ್ತಿದ್ದರೆ ಈ ಚಿತ್ರ ಯಾವತ್ತೋ ತೆರೆಕಾಣಬೇಕಿತ್ತು. ಇಷ್ಟದೇವರ ಮೇಲೆ ಭಾರ ಹಾಕಿ ಈಗ ಬಿಡುಗಡೆ ಮಾಡುತ್ತಿದ್ದಾರೆ. ಈ ನಾಲ್ಕು ಚಿತ್ರಗಳಲ್ಲಿ ತುಂಬಾ ಹಳೆಯ ಪ್ರಾಜೆಕ್ಟ್ ಎಂದರೆ 'ಸೈಕಲ್‌'. ಎರಡೂ¾ರು ವರ್ಷಗಳ ಹಿಂದೆಯೇ ಸೆಟ್ಟೇರಿದ 'ಸೈಕಲ್‌' ಯಾಕೋ ಸ್ಪೀಡಾಗಿ ಹೋಗಲೇ ಇಲ್ಲ. ಈ ವಾರ ಥಿಯೇಟರ್‌ ಮುಂದೆ ತಂದು ನಿಲ್ಲಿಸಲಿದ್ದಾರೆ.
ಇದು ಈ ವಾರ ತೆರೆಕಾಣುತ್ತಿರುವ ಚಿತ್ರಗಳಾದರೆ ಜುಲೈ ತಿಂಗಳಿಗಾಗಿ ಕಾದು ಕುಳಿತಿರುವ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಇಲ್ಲಿ ಹೊಸಬರ ಜೊತೆ ಅಪ್‌ಕಮಿಂಗ್‌ ಸ್ಟಾರ್‌ಗಳ ಸಿನಿಮಾಗಳೂ ಇವೆ ಅನ್ನೋದು ಗಮನಾರ್ಹ. ಈಗಾಗಲೇ ಸಿನಿಮಾ ಮುಗಿಸಿ ಥಿಯೇಟರ್‌ ಸೆಟಪ್‌ ಹಾಗೂ ಗ್ಯಾಪ್‌ಗಾಗಿ ಕಾದು ಕುಳಿತ ಚಿತ್ರಗಳು ಜುಲೈಗೆ ಥಿಯೇಟರ್‌ಗೆ ಬರಲು ರೆಡಿಯಾಗಿವೆ. ಅದರಲ್ಲಿ ಒಂದಷ್ಟು ಸಿನಿಮಾಗಳ ಬಗ್ಗೆ ನಿರೀಕ್ಷೆಯೂ ಇದೆ. 'ಟೋನಿ', 'ವಿಕ್ಟರಿ', 'ಲೂಸ್‌ಗಳು', 'ಕಾಫಿ ವಿತ್‌ ಮೈ ವೈಫ್', 'ಗೂಗ್ಲಿ', 'ಸಿಲ್ಕ್', 'ಬರ್ಫಿ', 'ಅಲೆ', 'ವಿಜಲ್‌', 'ಚೆಲ್ಲಾಪಿಲ್ಲಿ' ಚಿತ್ರಗಳು ಸೇರಿದಂತೆ ಇನ್ನೂ ಒಂದಷ್ಟು ಚಿತ್ರಗಳು ಜುಲೈನಲ್ಲಿ ತೆರೆಕಾಣಲು ಮುಂದಾಗಿವೆ. ಜುಲೈಯಲ್ಲಿ ತೆರೆಕಾಣುತ್ತಿರುವ ಹೆಚ್ಚಿನ ಚಿತ್ರಗಳಲ್ಲಿ ಹೊಸಬರಿಗಿಂತ ಹೆಚ್ಚಾಗಿ ಅಪ್‌ಕಮಿಂಗ್‌ ಸ್ಟಾರ್‌ಗಳ ಹಾಗೂ ಈಗಾಗಲೇ ಭರವಸೆ ಮೂಡಿಸಿದ ನಟ, ನಟಿಯರ ಚಿತ್ರಗಳೇ ಹೆಚ್ಚಿವೆ ಎಂಬುದು ಗಮನಾರ್ಹ.
ಏನೇ ಆದರೂ, ನಿರ್ಮಾಪಕನ ಖರ್ಚಿಗೆ, ನಿರ್ದೇಶಕನ ಕಾನ್ಸೆಪ್ಟ್ಗೆ, ಕಲಾವಿದನ ಪರ್‌ಫಾರ್ಮೆನ್ಸ್‌ಗೆ ಬೆಲೆ ಬರೋದು ಪ್ರೇಕ್ಷಕ ಎಂಬ ಬಿಗ್‌ಬಾಸ್‌ ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದಾಗ ಮಾತ್ರ....

No comments:

Post a Comment